
ಹಾಸನ: ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬದಲಾವಣೆ ಆಗಬಹುದು ಎಂಬ ಚರ್ಚೆ ಜನಸಾಮಾನ್ಯರಲ್ಲಿದೆ. ಆದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಾತಾವರಣ ಇಲ್ಲ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕರ್ನಾಟಕದ ರಾಜಕೀಯ ಪರಿಸ್ಥಿತಿಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಟಿವಿಕೆ ವಿಜಯವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಇಲ್ಲಿ ಇರುವ ರಾಜಕೀಯ ಪರಿಸ್ಥಿತಿ ಬೇರೆ ರಾಜ್ಯಗಳಿಗಿಂತ ವಿಭಿನ್ನವಾಗಿದೆ ಎಂದರು. ತಮಿಳುನಾಡಿನ ರಾಜಕಾರಣದಲ್ಲಿ ಸಿನಿಮಾದ ಪ್ರಭಾವ ಬಹಳ ಹಿಂದಿನಿAದಲೂ ಇದೆ. ಈಗಲೂ ಅದೇ ಪ್ರಭಾವ ಕಾಣಿಸಿದೆ. ಹೊಸ ಮುಖಕ್ಕೆ ಅಧಿಕಾರ ನೀಡಬೇಕು ಎಂಬ ಮನೋಭಾವದಿಂದ ಜನ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಡೆ ಕುರಿತು ಟೀಕೆ ಮಾಡುವ ಅಗತ್ಯವಿಲ್ಲ. ಯಾವ ಸಂದರ್ಭಗಳಲ್ಲಿ ಅದು ಸರ್ಕಾರಗಳನ್ನು ಅಸ್ಥಿರಗೊಳಿಸಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಕೇಂದ್ರದಲ್ಲಿ ಚರಣ್‌ಸಿಂಗ್, ವಿ.ಪಿ.ಸಿಂಗ್, ಚಂದ್ರಶೇಖರ್ ಸರ್ಕಾರಗಳ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳೇ ಸಾಕು. ದೇವೇಗೌಡರು ಪ್ರಧಾನಿಯಾಗಿದ್ದಾಗ ಯಾವ ಕಾರಣವನ್ನು ನೀಡಿ ಸರ್ಕಾರ ಕೆಡವಿದರು ಎಂಬುದು ದೇಶಕ್ಕೆ ಗೊತ್ತಿದೆ ಎಂದು ಹೇಳಿದರು.
ಇಪ್ಪತ್ತು ವರ್ಷಗಳ ಕಾಲ ಡಿಎಂಕೆ ಜೊತೆ ಇದ್ದವರು. ಈಗ ವಿಜಯ್ ಜೊತೆ ಸೇರಿದ್ದಾರೆ. ಅವರ ರಾಜಕೀಯ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡೇ ತೀರ್ಮಾನ ಮಾಡಿರಬಹುದು. ಅದರ ಬಗ್ಗೆ ಕಾಲವೇ ಉತ್ತರ ನೀಡಲಿದೆ ಎಂದರು.







