
ಬೆಂಗಳೂರು: ರಾಜ್ಯದಲ್ಲಿ ಹೋಟೆಲ್ಗಳಿಗೆ ಒಂದು ವಾರದಿಂದ 10 ದಿನಗಳ ಕಾಲ ಕಮರ್ಷಿಯಲ್ ಗ್ಯಾಸ್ ಸಮಸ್ಯೆ ಆಗಬಹುದು. ಅಲ್ಲಿವರೆಗೂ ಹೋಟೆಲ್ಗಳು ಸಹಿಸಿಕೊಳ್ಳಬೇಕು ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಶುಕ್ರವಾರ ರಾಜ್ಯದಲ್ಲಿರುವ ಗ್ಯಾಸ್ ಸಮಸ್ಯೆ ಬಗ್ಗೆ ಕಾಂಗ್ರೆಸ್ ಸದಸ್ಯರಾದ ಐವಾನ್ ಡಿಸೋಜ ಮತ್ತು ನಾಗರಾಜ್ ಯಾದವ್ ವಿಷಯ ಪ್ರಸ್ತಾಪ ಮಾಡಿದರು. ಆಟೋ, ಹೋಟೆಲ್ಗಳಿಗೆ ಗ್ಯಾಸ್ ಸಿಕ್ತಿಲ್ಲ. ಗ್ಯಾಸ್ ಕಾಳಸಂತೆಯಲ್ಲಿ ಮಾರಾಟ ಆಗ್ತಿದೆ. ಹೋಟೆಲ್ನಲ್ಲಿ ತಿಂಡಿ, ಊಟ ಸಮಸ್ಯೆ ಆಗಿದೆ. ಗ್ಯಾಸ್ ರೇಟ್ ಏರಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸುದ್ದಿ ಆಗ್ತಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಮನವಿ ಮನವಿ ಮಾಡಿದರು.
ವಿಶ್ವವಿದ್ಯಾಲಯಗಳಲ್ಲಿ ಗ್ಯಾಸ್ ಇಲ್ಲದೆ ಊಟ ಕೊಡಲು ಆಗ್ತಿಲ್ಲ. ಹೀಗಾಗಿ ಗ್ಯಾಸ್ ಸಮಸ್ಯೆ ಮುಗಿಯೋವರೆಗೂ ವಿವಿಗಳಿಗೆ ರಜೆ ಕೊಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಇಂದಿರಾ ಕ್ಯಾಂಟೀನ್, ಆಸ್ಪತ್ರೆಗಳಲ್ಲಿ ಸಮಸ್ಯೆ ಆಗಿದೆ. ಮದುವೆಗಳು ನಿಂತಿವೆ. ದೇವಸ್ಥಾನದಲ್ಲಿ ಪ್ರಸಾದ ಸಿಕ್ತಿಲ್ಲ. ರಾಜ್ಯ ಸರ್ಕಾರ ಗ್ಯಾಸ್ ಸಮಸ್ಯೆಗೆ ಕ್ರಮ ತಗೋಬೇಕು ಎಂದು ಒತ್ತಾಯ ಮಾಡಿದರು.
ಇದಕ್ಕೆ ಸಚಿವ ಮುನಿಯಪ್ಪ ಉತ್ತರ ನೀಡಿ, ಇಂದು ಕೂಡ ಆಯಿಲ್ ಕಂಪನಿ ಜೊತೆ ಮಾತುಕತೆ ಮಾಡಿದ್ದೇನೆ. ಆಸ್ಪತ್ರೆ, ಹಾಸ್ಟೆಲ್, ವಸತಿ ನಿಲಯಕ್ಕೆ ಕಮರ್ಷಿಯಲ್ ಗ್ಯಾಸ್ ಕೊಡ್ತೀವಿ. ಈಗ ತಕ್ಷಣಕ್ಕೆ ಸಮಸ್ಯೆ ಆಗಿದೆ. ಒಂದು ವಾರದಲ್ಲಿ ಸಮಸ್ಯೆ ಪರಿಹಾರ ಆಗಲಿದೆ. ಹೋಟೆಲ್ ಅವರಿಗೆ ಎಲೆಕ್ಟ್ರಿಕ್ ಸ್ಟೌವ್ ಬಳಕೆ ಮಾಡಿ ಅಂತ ಮನವಿ ಮಾಡಿದ್ದೇವೆ. ಹೋಟೆಲ್ ಅವರು ಒಂದು ವಾರ ಸಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಈಗಾಗಲೇ ಇಂದನ ತುಂಬಿದ ಎರಡು ಹಡಗು ಬಂದಿದೆ. ಮತ್ತೆ 10-12 ಹಡಗು ಬರುವ ಸಾಧ್ಯತೆ ಇದೆ. ಆಗ ಸಮಸ್ಯೆ ಸರಿ ಆಗುತ್ತದೆ. ಕಾಳಸಂತೆ ಮಾರಾಟದ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆಗೆ ಸೂಚನೆ ಕೊಡಲಾಗಿದೆ. ಡಿಜಿ ಅವರಿಗೆ ಸೂಚನೆ ಕೊಡಲಾಗಿದೆ. ಕಮರ್ಷಿಯಲ್ ಗ್ಯಾಸ್ಗೆ ಒಂದು ವಾರ ಅಥವಾ 10 ದಿನ ಸಮಸ್ಯೆ ಆಗುತ್ತದೆ. ಸ್ಟಾಕ್ ಇಲ್ಲದ ಕಾರಣ ಸಹಿಸಿಕೊಳ್ಳಬೇಕು. ಆಟೋಗಳಿಗೆ ಗ್ಯಾಸ್ ಅವಕಾಶ ಮಾಡಿಕೊಡಲು ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.


