ಬೆಂಗಳೂರು: ನನ್ನ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗೆ ದೂರು ನೀಡಿದವರು ಯಾರು ಎಂಬುದು ನನಗೆ ತಿಳಿದಿದೆ. ಅಲ್ಲದೆ, ಈ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಮಾಧ್ಯಮಗಳ ಜೊತೆ ಶನಿವಾರ ಮಾತನಾಡಿದ ಅವರು, ದೂರು ನೀಡಿದವರು ಯಾರೆಂದು ಮೊದಲೇ ನನಗೆ ಗೊತ್ತಿತ್ತು. ದೂರು ನೀಡುವುದರಲ್ಲಿ ತಪ್ಪೇನೂ ಇಲ್ಲ. ಹಾಗೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆರೋಪಗಳನ್ನು ಮಾಡಲು ಪ್ರತಿಯೊಬ್ಬರಿಗೂ ಸ್ವಾತಂತ್್ರಯವಿದೆ ಎಂದು ಜಾರಕಿಹೊಳಿ ಹೇಳಿದರು.
ದೂರುದಾರರ ಗುರುತನ್ನು ಬಹಿರಂಗಪಡಿಸಲಿಲ್ಲ. ದೂರುದಾರ ಆಡಳಿತಾರೂಢ ಕಾಂಗ್ರೆಸ್ ಪಕ್ಷದವರೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸದೆ ಅಥವಾ ನಿರಾಕರಿಸದೆ ಮಾತನಾಡಿದರು. ಆರೋಪ ಮಾಡಲು ಮತ್ತು ದೂರು ಸಲ್ಲಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದರು.
ಇಡಿ ಶೋಧ ಕಾರ್ಯಾಚರಣೆಗಳಲ್ಲಿ, ಜಾರಕಿಹೊಳಿ ಕುಟುಂಬ ಅನೇಕ ವಿದೇಶಿ ಸಂಸ್ಥೆಗಳಲ್ಲಿ ಷೇರುಗಳನ್ನು ಹೊಂದಿದೆ ಹಾಗೂ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಿಂದ ಲಂಚ ಪಡೆಯುವಲ್ಲಿ ತೊಡಗಿಸಿಕೊಂಡಿದೆ ಎಂಬ ಅಂಶಗಳು ಬೆಳಕಿಗೆ ಬಂದಿವೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.
ಆದರೆ, ಅಂತಹ ಯಾವುದೇ ವಿದೇಶಿ ಹೂಡಿಕೆಗಳನ್ನು ಮಾಡಿಲ್ಲ ಎಂದು ಪ್ರತಿಪಾದಿಸಿರುವ ಜಾರಕಿಹೊಳಿ, ಈ ಪ್ರಕರಣವನ್ನು ಕಾನೂನುಬದ್ಧವಾಗಿ ಎದುರಿಸುವುದಾಗಿ ಹೇಳಿದ್ದಾರೆ. ದೂರುದಾರರಿಗೆ ರಾಜಕೀಯ ಬಲವಿದೆಯೇ ಎಂದು ಕೇಳಿದಾಗ, ‘ಅಂತಹದ್ದೇನೂ ಇಲ್ಲ’ ಎಂದು ಹೇಳಿದರು.
ಇವು ಕೇವಲ ಆರೋಪಗಳು. ನನ್ನನ್ನು ನಾನು ಸಮರ್ಥಿಸಿಕೊಳ್ಳಲು ನನಗೆ ಅವಕಾಶಗಳಿವೆ. ನಾನು ಸತ್ಯಾಂಶಗಳನ್ನು ಜಾರಿ ನಿರ್ದೇಶನಾಲಯದ ಮುಂದೆ ಮಂಡಿಸುತ್ತೇನೆ. ತನಿಖೆ ನಡೆಯಲಿ ಮತ್ತು ಸತ್ಯ ಹೊರಬರಲಿ. ಅದರ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ದೂರುದಾರ ಕಾಂಗ್ರೆಸ್ಸಿಗ,
ಬಿಜೆಪಿಯೂ ಹೌದು!
ದೂರುದಾರ ವ್ಯಕ್ತಿಗೆ ಕಾಂಗ್ರೆಸ್ನೊಂದಿಗೆ ಸಂಬಂಧವಿದೆ. ಆದರೆ ಮತದಾರರ ಪಟ್ಟಿಯಲ್ಲಿ ಅವರು ಬಿಜೆಪಿ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಇದು 50:50 ಸ್ಥಿತಿಯಲ್ಲಿದೆ. ಈ ಬಗ್ಗೆ ಏನನ್ನೂ ಹೇಳುವುದು ಕಷ್ಟಕರ ವಿಷಯ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ದೂರುದಾರರು ಸ್ವತಃ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿರುವ ಸಾಧ್ಯತೆ ಮತ್ತು ಅವರ ನಿಜವಾದ ಉದ್ದೇಶದ ಕುರಿತು ಕೇಳಲಾದ ಪ್ರಶ್ನೆಗೆ, ಮುಖ್ಯಮಂತ್ರಿಗಳು ಈ ವಿಷಯವನ್ನು ಪರಿಶೀಲಿಸುತ್ತಾರೆ. ದೂರು ನೀಡಿದವರು ನಮ ಪಕ್ಷದವರು ಎಂದು ನಾನು ಹೇಳಿಲ್ಲ. ಅವರು ನಮ ಪಕ್ಷದವರಾಗಿರಬಹುದು ಅಥವಾ ಇಲ್ಲದಿರಬಹುದು. ಈ ವಿಷಯವನ್ನು ಪರಿಶೀಲಿಸುವಂತೆ ಸಿಎಂಗೆ ಹೇಳಿದ್ದೇನೆ ಅಷ್ಟೇ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಸತ್ಯಾಂಶಗಳು ಮತ್ತು ದಾಖಲೆಗಳೊಂದಿಗೆ ತನಿಖೆಯನ್ನು ಎದುರಿಸುವುದಾಗಿ ಹಾಗೂ ಪ್ರಕರಣವನ್ನು ಕಾನೂನುಬದ್ಧವಾಗಿ ನಿಭಾಯಿಸುವುದಾಗಿಯೂ ಹೇಳಿದರು.







