
ನವದೆಹಲಿ: ಭಾರತದ ಪ್ರಜಾಪ್ರಭುತ್ವದ ಪಯಣದಲ್ಲಿ ಮಹಿಳಾ ಮೀಸಲಾತಿ ಜಾರಿ ಐತಿಹಾಸಿಕ ಕ್ಷಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಸ್ತಾಪಿತ ಮಹಿಳಾ ಮೀಸಲು ಕಾಯ್ದೆಗೆ ತಿದ್ದುಪಡಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವಿಷಯದಲ್ಲಿ ರಾಜಕೀಯ ಮಾಡದಂತೆ ಎಲ್ಲ ಸಂಸದರಿಗೆ ಮನವಿ ಮಾಡಿದರು. ಮಹಿಳಾ ಮೀಸಲಾತಿ ಮಸೂದೆ ವಿರೋಧಿಸುವವರು ದೀರ್ಘಕಾಲದವರೆಗೆ ಬೆಲೆ ತೆರಬೇಕಾಗುತ್ತದೆ. ನಮ್ಮ ಹಕ್ಕುಗಳ ವಿರುದ್ಧ ನಿಂತವರು ಯಾರು ಎಂಬುದನ್ನು ಮಹಿಳೆಯರು ಎಂದಿಗೂ ಮರೆಯುವುದಿಲ್ಲ ಎಂದು ಎಚ್ಚರಿಸಿದರು.
ಭಾರತದ ಅಭಿವೃದ್ಧಿಯನ್ನು ಕೇವಲ ಮೂಲಸೌಕರ್ಯದಿಂದ ಅಳೆಯಲಾಗುವುದಿಲ್ಲ. ಅದು ನೀತಿ ನಿರೂಪಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನೂ ಪ್ರತಿಬಿಂಬಿಸಬೇಕು. ಭಾರತದ ಅಭಿವೃದ್ಧಿ ಪಯಣದಲ್ಲಿ ಮಹಿಳೆಯರನ್ನು ನಿರ್ಣಯ ಕೈಗೊಳ್ಳುವುದರ ಭಾಗವಾಗಿಸುವ ಅವಕಾಶ ಸಂಸದರ ಬಳಿ ಇದೆ. ಆಡಳಿತದಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಅಭಿವೃದ್ಧಿ ಹೊಂದಿದ ದೇಶ ನಿರ್ಮಾಣಕ್ಕೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ರಾಜಕೀಯ ಬಣ್ಣ ನೀಡದಿರುವ ಬಗ್ಗೆ ಸಂಸದರನ್ನು ಎಚ್ಚರಿಸಿದ ಮೋದಿ, ಕಾಯ್ದೆ ಮೂಲಕ ಮಹಿಳಾ ಮೀಸಲಾತಿ ಜಾರಿಯನ್ನು ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸಬೇಕೆ ಹೊರತು ಇಬ್ಭಾಗಿಸುವ ಅರ್ಥದಲ್ಲಲ್ಲ. ಮಹಿಳಾ ಮೀಸಲಾತಿ ಮಸೂದೆಯನ್ನು ರಾಜಕೀಕರಣಗೊಳಿಸುವ ಯಾವುದೇ ಅಗತ್ಯ ಇಲ್ಲ ಎಂದು ತಿಳಿಸಿದರು.
ರಾಜಕೀಯ ಬೇಡ: ಮೋದಿ







