
ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಹೊರಟ್ಟಿದ್ದವರು ಮಸಣಕ್ಕೆ
ರಾಯಚೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಂಟು ಮಂದಿ ಭಕ್ತರು ದುರಂತ ಅಂತ್ಯಕಂಡಿದ್ದಾರೆ.
ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಬೊಲೆರೋ ವಾಹನದಲ್ಲಿ ತೆರಳುತ್ತಿದ್ದಾಗ ಸಿಮೆಂಟ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕುಮಾರ್ (50), ದೀಪಿಕಾ (42) , ಸುನಿಲ್ (40) ಯಶೋಧಮ್ಮ (60), ಪುಟ್ಟಮ್ಮ (55), ಬೆಳ್ಳಿ (3), ಲೋಲಾಕ್ಷಿ ಹಾಗೂ ಮೀನಾಕ್ಷಿ ಮೃತಪಟ್ಟವರು.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಭೀಕರ ಅಪಘಾತದ ರಭಸಕ್ಕೆ ಆರು ಭಕ್ತರು ಸ್ಥಳದಲ್ಲಿಯೇ ಸಾವನ್ನಪ್ಪಿದರು. ಇಬ್ಬರು ಎಮಿಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಕಾರಿಯಾಗದೇ ಉಸಿರು ಚೆಲ್ಲಿದ್ದಾರೆ. ಇನ್ನುಳಿದ 13 ಜನರಿಗೆ ಎಮಿಗನೂರು ಹಾಗೂ ಕರ್ನೂಲ್ ಸರ್ಕಾರಿ ಚಿಕಿತ್ಸೆ ನೀಡಲಾಗಿದೆ.
ಚಿಕ್ಕಮಗಳೂರು, ಹಾಸನ ಮೂಲದ ಭಕ್ತರು ಬೊಲೆರೋ ವಾಹನದಲ್ಲಿ ರಾಯರ ದರ್ಶನಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಸಿಮೆಂಟ್ ಮತ್ತು ಜಲ್ಲಿಕಲ್ಲು ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಬೊಲೆರೋ ವಾಹನದಲ್ಲಿ ಒಟ್ಟು 21 ಜನರು ಪ್ರಯಾಣಿಸುತ್ತಿದ್ದರು. 13 ಮಂದಿ ತೀವ್ರ ಗಾಯಗೊಂಡಿದ್ದಾರೆ.
ಡಿಕ್ಕಿಯಾದ ರಭಸಕ್ಕೆ ಬೊಲೆರೊ ವಾಹನ ಅಪ್ಪಚ್ಚಿಯಾಗಿದೆ. ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಧಾವಿಸಿ ಪರಿಶೀಲಿಸಿದರು. ಗಾಯಾಳುಗಳನ್ನು ಕರ್ನೂಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಭೀಕರ ಅಪಘಾತ: 8 ಮಂದಿ ಸಾವು







