Tumakuru: ತುಮಕೂರಿನ ಅಮ್ಲಾಪುರದಲ್ಲಿರುವ ಜಾಮಿಯಾ ಅರೇಬಿಯಾ ಹಸೀನಿಯಾ ಟ್ರಸ್ಟ್‌ನ ಮದರಸಾದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಮದರಸಾ ಮೌಲ್ವಿ ಮೌಲಾಲಿ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮದರಸಾದಲ್ಲಿದ್ದ ಬಿಹಾರ ಮೂಲದ 24 ಮಕ್ಕಳು ಕಿರುಕುಳದಿಂದ ಬೇಸತ್ತು ಅಲ್ಲಿಂದ ಓಡಿ ಹೋಗಿದ್ದರೆಂದು ತಿಳಿದುಬಂದಿದೆ. ಬಳಿಕ ಮಕ್ಕಳು Bengaluru ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ರೈಲ್ವೆ ರಕ್ಷಣಾ ದಳ (RPF) ಅವರು ಮಕ್ಕಳನ್ನು ರಕ್ಷಣೆ ಮಾಡಿದೆ.
ಮಕ್ಕಳಿಗೆ ಊಟ ನೀಡದೇ ಕಿರುಕುಳ ನೀಡಲಾಗುತ್ತಿತ್ತು ಎನ್ನುವ ಆರೋಪ ಕೇಳಿಬಂದಿದ್ದು, ಮೌಲ್ವಿ ಮೌಲಾಲಿ ಮಕ್ಕಳಿಂದ ಕಲ್ಲು ಹೊರಿಸುವ ಕೆಲಸ ಮಾಡಿಸುತ್ತಿದ್ದರೆಂದು ಹೇಳಲಾಗಿದೆ. ಕೆಲಸ ಮಾಡಲು ನಿರಾಕರಿಸಿದ ಮಕ್ಕಳಿಗೆ ದೈಹಿಕ ಹಿಂಸೆ ನೀಡಲಾಗುತ್ತಿತ್ತೆಂಬ ಆರೋಪವೂ ಕೇಳಿಬಂದಿದೆ.
ಪ್ರಕರಣವು ಮಕ್ಕಳ ಕಲ್ಯಾಣ ಸಮಿತಿ (CWC) ಗಮನಕ್ಕೆ ಬಂದ ನಂತರ ತುಮಕೂರಿಗೆ ವರ್ಗಾವಣೆಗೊಂಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೌಲ್ವಿ ವಿರುದ್ಧ ಬಾಲ ನ್ಯಾಯ ಕಾಯ್ದೆ (Juvenile Justice Act) ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಘಟನೆಯ ವಿವಿಧ ಆಯಾಮಗಳ ಕುರಿತು ತುಮಕೂರು ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.













