
ನವದೆಹಲಿ: ವೈದ್ಯಕೀಯ ಶಿಕ್ಷಣ ಪ್ರವೇಶಾತಿಗೆ ದೇಶಾದ್ಯಂತ ನಡೆಸಿದ್ದ ನೀಟ್ ಯುಜಿ ಪರೀಕ್ಷೆಯನ್ನು ಅಕ್ರಮದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ರದ್ದುಗೊಳಿಸಿ ಆದೇಶಿಸಿದೆ. ಅಕ್ರಮದ ಬಗ್ಗೆ ಸಿಬಿಐ ತನಿಖೆಗೆ ವಹಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಪರೀಕ್ಷೆ ಬರೆದಿದ್ದ ಲಕ್ಷಾಂತರ ಆಕಾಂಕ್ಷಿಗಳಿಗೆ ಇದರಿಂದ ನಿರಾಸೆ ಆಗಿದೆ. ಅಲ್ಲದೆ, ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಬೇಕಾದ ಆತಂಕದಲ್ಲಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಪರೀಕ್ಷಾ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕಾಪಾಡಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್ಟಿಎ ತಿಳಿಸಿದೆ. ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.
ಭಾರತದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಯುಜಿ 2026 ಅನ್ನು ‘ಗೆಸ್ ಪತ್ರಿಕೆ’ ಸೋರಿಕೆ ಆರೋಪದ ನಂತರ ರದ್ದುಪಡಿಸಲಾಗಿದೆ. ಮೇ 3ರಂದು ನಡೆದ ಪರೀಕ್ಷೆಯ ಸಮಗ್ರತೆಯ ಬಗ್ಗೆ ಕೇಂದ್ರೀಯ ಸಂಸ್ಥೆಗಳಿಂದ ಬಂದ ಮಾಹಿತಿಗಳು ಕಳವಳಕಾರಿಯಾಗಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಕಾನೂನು ಜಾರಿ ಸಂಸ್ಥೆಗಳು ಹಂಚಿಕೊಂಡ ಮಾಹಿತಿಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. ಅಭ್ಯರ್ಥಿಗಳು ಎನ್ ಟಿಎ ಅಧಿಕೃತ ಮಾಹಿತಿಗಳನ್ನು ಮಾತ್ರ ನಂಬಬೇಕು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ತಪ್ಪು ಮಾಹಿತಿಯನ್ನು ನಂಬಬಾರದು. ವಿದ್ಯಾರ್ಥಿಗಳು ಮತ್ತೆ ತಯಾರಿ ಮಾಡಿಕೊಂಡು ಪರೀಕ್ಷೆಗೆ ಸಿದ್ಧರಾಗಿರಬೇಕು ಎಂದು ಎನ್ ಟಿಎ ತಿಳಿಸಿದೆ.
ಅಕ್ರಮ: ನೀಟ್ ಪರೀಕ್ಷೆ ರದ್ದು ಸಿಬಿಐ ತನಿಖೆಗೆ ಆದೇಶ ಲಕ್ಷಾಂತರ ಆಕಾಂಕ್ಷಿಗಳಿಗೆ ನಿರಾಸೆ









