
ಬೆಂಗಳೂರು: ರಾಜ್ಯದಲ್ಲಿ ಬರದ ಪರಿಸ್ಥಿತಿ ತೀವ್ರಗೊಂಡ ನಡುವೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಪ್ರತ್ಯೇಕವಾಗಿ ಸೆ.1ರಿಂದ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಬೆಳಿಗ್ಗೆ 10ಕ್ಕೆ ಬೆಂಗಳೂರಿನಿದ ವಿಶೇಷ ವಿಮಾನದಲ್ಲಿ ಹೊರಟು ಹುಬ್ಬಳ್ಳಿಗೆ ತಲುಪುವರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಗದಗಕ್ಕೆ ತೆರಳುವರು. ಗದಗ ಜಿಲ್ಲೆ ವಿವಿಧ ಬರಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಲಿದ್ದಾರೆ. ಸುಮಾರು 5 ಗಂಟೆ ಕಾಲ ಗದಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಇರಲಿದ್ದಾರೆ.
ಸಂಜೆ ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಮರಳುವರು.
ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಸೆ.1 ಹಾಗೂ 2ರಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ 10ರಿಂದ ಮೈಸೂರು ಜಿಲ್ಲೆಯ ಕೃಷ್ಣರಾಜನಗರ, ಹುಣಸೂರು ಹಾಗೂ ತಿ.ನರಸೀಪುರ ತಾಲ್ಲೂಕುಗಳ ಬರಪೀಡಿತ ಸ್ಥಳಗಳ ಪರಿಶೀಲನೆ ನಡೆಸುವರು. ಸಂಜೆ 5ರಿಂದ ಮೈಸೂರು ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಬರ ಕುರಿತು ಅಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ. ಬುಧವಾರ ಬೆಳಿಗ್ಗೆ ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು ಹಾಗೂ ಹನೂರು ತಾಲ್ಲೂಕನ ಬರ ಪರಿಸ್ಥಿತಿ ಪರಾಮರ್ಶೆ ಮಾಡುವರು.
ಸಿಎಂ, ಡಿಸಿಎಂ ಪ್ರತ್ಯೇಕ ಬರ ಪರಿಶೀಲನೆ ಪ್ರವಾಸ









