
ಮಂಡ್ಯ: ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ ಮತ್ತೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಗೆ ಟಿಕೆಟ್ ಸಿಗಲೇಬೇಕು ಎಂದು ಬೆಂಬಲಿಗರ ಮೂಲಕ ಬಿಜೆಪಿ ವರಿಷ್ಠರ ಮೇಲೆ ತೀವ್ರ ಒತ್ತಡ ಹೇರಲು ಸುಮಲತಾ ಮುಂದಾಗಿದ್ದಾರೆ.
ಮAಡ್ಯ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸುಮಲತಾ ಅವರು ಯಾವುದೇ ಪ್ರಮುಖ ಕಾರ್ಯಕ್ರಮ ಅಥವಾ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ ರಾಜ್ಯಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಅಸ್ತಿತ್ವಕ್ಕಾಗಿ ಅವರ ಹೋರಾಟ ಮತ್ತೆ ಮುಂಚೂಣಿಗೆ ಬಂದಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಸುಮಲತಾ ಮಂಡ್ಯ ಕ್ಷೇತ್ರವನ್ನು ಎಚ್.ಡಿ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ದರು. ಆ ಸಮಯದಲ್ಲಿ ಬಿಜೆಪಿ ನಾಯಕರು ಸುಮಲತಾ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಗೌರವ ಹಾಗೂ ಉನ್ನತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಆದರೆ ಕ್ಷೇತ್ರ ತ್ಯಾಗ ಮಾಡಿದ ಬಳಿಕ ಬಿಜೆಪಿಯು ಸುಮಲತಾ ಅವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿದೆ ಎನ್ನುವುದು ಬೆಂಬಲಿಗರ ಆರೋಪ.
ಈಗ ಸುಮಲತಾ ಬೆಂಬಲಿಗರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿ ರಾಜ್ಯಸಭೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಇಷ್ಟು ದಿನ ರಾಜಕೀಯದಿಂದ ದೂರ ಉಳಿದಿದ್ದ ಸುಮಲತಾ ಈಗ ಬೆಂಬಲಿಗರ ಮೂಲಕ ಪದೇ ಪದೇ ಒತ್ತಾಯ ಮಾಡಿಸುವ ತಂತ್ರದೊAದಿಗೆ ಮರಳಿ ರಾಜಕೀಯ ಅಸ್ತಿತ್ವ ಪಡೆಯಲು ಹರಸಾಹಸ ಪಡುತ್ತಿದ್ದಾರೆ.







