ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಸುಮಾರು 25 ವರ್ಷಗಳಿಗೂ ಅಧಿಕ ಕಾಲ ಭಾಗವಹಿಸಿದ್ದ ಹಾಗೂ ಸತತ 6 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ವಿಜೃಂಭಣೆಯಿಂದ ಹೆಜ್ಜೆ ಹಾಕಿದ್ದ ಆನೆ ಅಭಿಮನ್ಯು ಈ ಬಾರಿಯ ದಸರಾಗೆ ಬರುತ್ತಿದ್ದಾನೆ.
ಅಭಿಮನ್ಯು ಅಭಿಮಾನಿಗಳ ಒತ್ತಾಯ, ಒತ್ತಡಕ್ಕೆ ಸರ್ಕಾರ ಕೊನೆಗೂ ಮಣಿದಿದೆ. 2026ರ ಮೈಸೂರು ದಸರಾ ಮಹೋತ್ಸವದಲ್ಲಿ ಕ್ಯಾಪ್ಟನ್ ಅಭಿಮನ್ಯು `ನಿಶಾನೆ ಆನೆ’ಯಾಗಿ ಭಾಗವಹಿಸುವುದು ಅಧಿಕೃತವಾಗಿ ಖಚಿತಪಟ್ಟಿದೆ.
ಅಭಿಮನ್ಯುವಿಗೆ 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ನೀಡಿ, ಆಗಸ್ಟ್ 26ರ ಗಜಪಯಣದ ವೇಳೆ ಗೌರವಯುತ ಬೀಳ್ಕೊಡುಗೆ ನೀಡಲಾಗಿತ್ತು. ಆದರೆ, ದಸರಾ ಆನೆಗಳ ಪಟ್ಟಿಯಲ್ಲಿ ಅಭಿಮನ್ಯು ಹೆಸರು ಇಲ್ಲದಿರುವುದಕ್ಕೆ ಅಭಿ
ಮಾನಿಗಳಿಂದ ತೀವ್ರ ಬೇಸರ ವ್ಯಕ್ತವಾಗಿತ್ತು. ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಒತ್ತಾಯ ಕೇಳಿಬಂದಿತ್ತು.
ಹೀಗಾಗಿ ಜನರ ಒತ್ತಾಯಕ್ಕೆ ಮಣಿದ ಸರ್ಕಾರ, ಅಂತಿಮವಾಗಿ ಅಭಿಮನ್ಯುವನ್ನು ಜಂಬೂಸವಾರಿಯಲ್ಲಿ ನಿಶಾನೆ ಆನೆಯನ್ನಾಗಿ ಕಳುಹಿಸಲು ಹಸಿರು ನಿಶಾನೆ ನೀಡಿದೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಅಭಿಮನ್ಯುವಿನ ಸುದೀರ್ಘ ಸೇವೆಯನ್ನು ಸರಿಸುವ ನಿಟ್ಟಿನಲ್ಲಿ ಈ ವಿಶೇಷ ಗೌರವ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
`ಅಂಬಾರಿ ಆನೆ’ ಯಾವುದು?
ಮೈಸೂರು ಅರಮನೆ ಆವರಣದಲ್ಲಿ ದಸರಾ ಗಜಪಡೆಗಳಿಗೆ ತಾಲೀಮು ಭರದಿಂದ ಸಾಗಿದೆ. ಆದರೆ, ಇನ್ನೂ ಅಂಬಾರಿ ಆನೆಯ ಆಯ್ಕೆ ನಡೆದಿಲ್ಲ. ದಸರಾ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿರುವ `ಅಂಬಾರಿ ಆನೆ’ಯನ್ನು ಅರಣ್ಯ ಇಲಾಖೆ ಇನ್ನೂ ಅಧಿಕೃತವಾಗಿ ಅಂತಿಮಗೊಳಿಸಿಲ್ಲ. ಇದರ ನಡುವೆ, ಧನಂಜಯ, ಮಹೇಂದ್ರ ಮತ್ತು ಪ್ರಶಾಂತ ಈ ಮೂರು ಆನೆಗಳನ್ನು ತಾಲೀಮಿನ ಅವಧಿಯಲ್ಲಿ ನಡಿಗೆ, ಗಾಂಭೀರ್ಯ, ಸಿಡಿಮದ್ದು ತಾಲೀಮಿಗಳಿಗೆ ಸ್ಪಂದಿಸುವ ರೀತಿ ಹಾಗೂ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಿ, ಜಂಬೂಸವಾರಿಗೆ ಕೆಲವೇ ದಿನಗಳ ಮುನ್ನ ಒಬ್ಬರನ್ನು ಅಂಬಾರಿ ಆನೆಯನ್ನಾಗಿ ಅಧಿಕೃತವಾಗಿ ಘೋಷಿಸಲಿದೆ.






