ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಆದೇಶದಂತೆ ಕರ್ನಾಟಕ ನೀರು ಹರಿಸುತ್ತಿದೆ. ಆದರೂ ಮತ್ತೇನು ನಿಮ್ಮ ಸಮಸ್ಯೆ ಎಂದು ತಮಿಳುನಾಡಿನ ಕ್ಯಾತೆಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ನ್ಯಾ. ವಿಕ್ರಮನಾಥ್ ನೇತೃತ್ವದ ಪೀಠದಲ್ಲಿ ಸೋಮವಾರ ಕಾವೇರಿ ಅರ್ಜಿ ವಿಚಾರಣೆ ನಡೆಯಿತು. ಕಾವೇರಿ ನೀರು ಹರಿಸುವ ವಿಚಾರದಲ್ಲಿ ತಮಿಳುನಾಡು ವಾದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು.
ಈ ವೇಳೆ ವಾದ ಮಂಡಿಸಿದ ಕರ್ನಾಟಕ, ಸಿಡಬ್ಲ್ಯೂಎಂಎ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚು ನೀರು ಹರಿಯುತ್ತಿದೆ. ಸಿಡಬ್ಲ್ಯೂಎಂಎ ನಿಗದಿಪಡಿಸಿದ್ದಕ್ಕಿಂತ ಅಧಿಕ ನೀರು ಹರಿದಿದೆ. ಕರ್ನಾಟಕದಲ್ಲಿ ಬರದ ಸ್ಥಿತಿ ಇದೆ. ಕಾವೇರಿ ಜಲಾನಯನ ಪ್ರದೇಶದ ಹಲವು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ ಎಂದು ತಿಳಿಸಿತು.ತಮಿಳುನಾಡು ವಾದ ಮಂಡಿಸಿ, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಜಲಾಶಯಗಳು ತುಂಬುತ್ತಿವೆ. ಆದರೂ ನಮಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. 35 ಟಿಎಂಸಿ ನೀರು ನಮಗೆ ಬರಬೇಕಿತ್ತು. ಇದುವರೆಗೆ ಅಷ್ಟು ನೀರು ಹರಿಸಿಲ್ಲ. ಬಾಕಿ ಉಳಿಸಿಕೊಂಡ ನೀರು ಹರಿಸಬೇಕು ಎಂದು ಹೇಳಿತು.
ತಮಿಳುನಾಡು ವಾದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕ ನೀರು ಹರಿಸುತ್ತಿದೆಯಲ್ಲ ಎಂದು ಕೋರ್ಟ್ ತಿಳಿಸಿತು. ಬಳಿಕ ವಿಚಾರಣೆಯನ್ನು ಸೆ.15ಕ್ಕೆ ಮುಂದೂಡಲಾಯಿತು. ಬಾಕಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಸಿಡಬ್ಲ್ಯುಎಂಎ ಅನ್ನು ಸಂಪರ್ಕಿಸಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿತು
ತಮಿಳುನಾಡು ಪರಿಷ್ಕೃತ ಅರ್ಜಿ ಸಲ್ಲಿಕೆ ಮಾಡಿ. ಸಿಡಬ್ಲು5್ಯಎಂಎ ಪ್ರತಿ ಹದಿನೈದು ದಿನಕ್ಕೊಮ್ಮೆ ಸಭೆ ನಡೆಸಿ ಪರಿಷ್ಕೃತ ಮಾಹಿತಿ ಆಧಾರದ ಮೇಲೆ ನೀರು ಹರಿಸಲು ಸೂಚಿಸಬೇಕು ಎಂದು ಮನವಿ ಸಲ್ಲಿಸಿತ್ತು.
ತಮಿಳುನಾಡಿಗೆ ಹರಿದ ಹೇಮೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ನಡುವೆಯೇ ಹೇಮಾವತಿ ಜಲಾಶಯದಿಂದಲೂ ಹೊರಹರಿವು ಹೆಚ್ಚಿಸಲಾಗಿದೆ. ಸೋಮವಾರ ಬೆಳಗ್ಗೆಯಿಂದ 5,500 ರಿಂದ 7,275 ಕ್ಯುಸೆಕ್ಗೆ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ 2,727 ಕ್ಯುಸೆಕ್ ಒಳಹರಿವಿದ್ದು, ಶೇ.78ರಷ್ಟು ನೀರು ಸಂಗ್ರಹವಾಗಿದೆ. ಹೇಮಾವತಿಯಿಂದ ಹರಿಯುವ ನೀರು ಕೆಆರ್ಎಸ್ ಸೇರುತ್ತದೆ.














